Ts ads

12 ಜುಲೈ, 2025

ಡಿಜಿಟಲ್ ಮಾಧ್ಯಮವನ್ನು ನೀವು ಸೋಷಿಯಲ್ ಮೀಡಿಯಾದಲ್ಲಿರೋರು ಸರಿದಾರಿಗೆ ತರಬಹುದು.. ತರ್ತೀರಾ? ಆಗುತ್ತಾ?

 

ಈಗ ಮಾಧ್ಯಮ ಮತ್ತೊಂದು ಮಜಲನ್ನು


ಕಂಡುಕೊಂಡಿದೆ. ಪ್ರಿಂಟ್, ವಿದ್ಯುನ್ಮಾನದಿಂದ ಅದು ಡಿಜಿಟಲ್‌ನತ್ತಲೂ ಹೊರಳಿ ಅಲ್ಲೂ ಪ್ರಬಲವಾಗುತ್ತಿದೆ. ಈ ಡಿಜಿಟಲ್ ಎಂಬುದರ ಒಳಗೆ ಆಯಾ ಮಾಧ್ಯಮಗಳ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳು ಬರುತ್ತವೆ. ಪ್ರಿಂಟ್‌ಗೆ ಪ್ರಸಾರ ಸಂಖ್ಯೆ, ವಿದ್ಯುನ್ಮಾನಕ್ಕೆ ಟಿಆರ್‌ಪಿ/ಬಾರ್ಕ್ ಇರುವಂತೆ ಈ ಡಿಜಿಟಲ್‌ ಮಾಧ್ಯಮಕ್ಕೆ ವ್ಯೂಸ್‌ಗಳೇ ಮಾನದಂಡ. 

ಅದರಲ್ಲೂ ಈ ಡಿಜಿಟಲ್ ಮಾಧ್ಯಮಗಳ ಮೂಲಕ ಒಂದು ಸುದ್ದಿಯನ್ನು ಓದುಗನ ಅಂಗೈಗೆ ನೇರವಾಗಿ‌ ಕ್ಷಿಪ್ರವಾಗಿ ತಲುಪಿಸಬಹುದು. ಓದುಗ ಕೂಡ ನೆಟ್‌ವರ್ಕ್ ಸೌಲಭ್ಯವೊಂದಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕೂಡ ಕುಳಿತು ತನಗೆ ಬೇಕಾದ ಸುದ್ದಿಯನ್ನು ಓದಬಹುದು/ತಿಳಿಯಬಹುದು. ಅಷ್ಟು ಪ್ರಬಲವಾಗಿರುವ ಈ ಮಾಧ್ಯಮ ಹಾದಿ ತಪ್ಪುತ್ತಿರುವುದು ಬೇಸರದ ಸಂಗತಿ. ಹಾಗಂತ ಇದಕ್ಕೆ ಅವರು ಕಾರಣ ಇವರು ಕಾರಣ ಅಂತ ಯಾವುದೋ ಒಂದು ಕಡೆಗೆ ಮಾತ್ರ ಬೆರಳು ತೋರಿಸಲು ಸಾಧ್ಯವಿಲ್ಲ. ಏಕೆಂದರೆ ಈಗ ಇದು ಹಾಗೆ ಒಬ್ಬರತ್ತ ಬೆರಳು ತೋರಿಸುವ ಹಂತವನ್ನು ದಾಟಿ ಬಿಟ್ಟಿದೆ. ಹೇಗೆ 'ಮೊಟ್ಟೆ ಮೊದಲೋ ಕೋಳಿ ಮೊದಲೋ' ಅಂದರೆ ಉತ್ತರಿಸಲು ಹೇಗೆ ಕಷ್ಟವಾಗುತ್ತದೋ ಅದೇ ರೀತಿ 'ಈ ಅವಸ್ಥೆಗೆ ಯಾರು‌ ಕಾರಣ?' ಎಂದರೆ ಯಾವುದೋ‌ ಒಂದು ವರ್ಗವನ್ನಷ್ಟೇ ದೂರಲು ಬರುವುದಿಲ್ಲ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅನ್ನುವ ಹಾಗೆ ಎರಡೂ ಕಡೆಯವರು ಕೈಜೋಡಿಸಿದರೆ ಮಾತ್ರ ಇದನ್ನು ಸರಿ ಮಾಡಬಹುದು. ಏಕೆಂದರೆ ತಪ್ಪಾಗಿದ್ದೂ ಎರಡು ಕೈ ಸೇರಿದ್ದರಿಂದಲೇ. ರಾಜಕೀಯ ವ್ಯವಸ್ಥೆ ಸರಿ ಹೋಗಬೇಕೆಂದರೆ ಒಳ್ಳೆಯ ವ್ಯಕ್ತಿ ಚುನಾವಣೆಗೆ ನಿಲ್ಲುವುದು ಎಷ್ಟು ಮುಖ್ಯವೋ, ಅಂಥವರನ್ನು ಮತ ಹಾಕಿ ಗೆಲ್ಲಿಸುವ ಒಳ್ಳೆಯವರ ಪಾತ್ರವೂ ಅಷ್ಟೇ ಮುಖ್ಯ. ಅದೇ ರೀತಿ ಈ ಡಿಜಿಟಲ್ ಮಾಧ್ಯಮ. ಇಲ್ಲಿಯೂ ಒಳ್ಳೆಯ ಸುದ್ದಿ ಪೋಸ್ಟ್ ಆಗುವುದು ಎಷ್ಟು ಮುಖ್ಯವೋ, ಅದನ್ನು ನೋಡಿ ಮೆಚ್ಚಿ, ಹಂಚಿಕೊಳ್ಳುವವರ ಪಾತ್ರವೂ ಅಷ್ಟೇ ಮುಖ್ಯ.

ಆ ಬಗ್ಗೆ ನನ್ನ ಒಂದಷ್ಟು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 

ಸದ್ಯ ಡಿಜಿಟಲ್ ಮಾಧ್ಯಮಗಳಲ್ಲಿ ವಿಷಯವಲ್ಲದ ವಿಷಯಗಳೇ ದೊಡ್ಡ ಸುದ್ದಿ ಆಗುತ್ತಿವೆ. ಅದಕ್ಕೆ ಕಾರಣ ಏನು ಅಂದರೆ ಅಂಥ ಸುದ್ದಿಗಳಿಗೆ ಸಿಗುವ ಪ್ರತಿಕ್ರಿಯೆ. ಅದನ್ನು ತಿಳಿಸುವ ಮುನ್ನ ಕೆಟ್ಟ ಸುದ್ದಿ ಅಂದರೆ ಯಾವುದು ಅನ್ನೋದನ್ನು ಹೇಳಬೇಕಾಗುತ್ತದೆ.


ಕೆಟ್ಟ ಸುದ್ದಿಯಲ್ಲಿ ಎರಡು ವಿಭಾಗ. ಒಂದು ಅದರಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಅದು ಕೆಟ್ಟ ಸುದ್ದಿ (ಕ್ರೈಮ್‌ನ ಎಲ್ಲ ಸುದ್ದಿಗಳೂ ಕೆಟ್ಟವಲ್ಲ) ಅನಿಸಿಕೊಳ್ಳುತ್ತದೆ. ಇನ್ನೊಂದು ಬರವಣಿಗೆಯ ಕಾರಣಕ್ಕೆ ಕೆಟ್ಟ ಸುದ್ದಿ ಅನಿಸಿಕೊಳ್ಳುತ್ತವೆ. ತಪ್ಪು ಬರಹ, ಕೆಟ್ಟ ನಿರೂಪಣೆ, ವ್ಯಾಕರಣದೋಷ, ಭಾಷಾಶುದ್ಧಿ ಇರದ ಬರಹವೂ ಕೆಟ್ಟ ಸುದ್ದಿಯೇ.


ಇನ್ನೊಬ್ಬರ ವೈಯಕ್ತಿಕ ಸಂಗತಿ, ಅಶ್ಲೀಲತೆಯ ಅತಿರಂಜಿತ ಮಾಹಿತಿಗಳೆಲ್ಲ ಸಮಾಜಕ್ಕೆ ಅಗತ್ಯವಿಲ್ಲ. ಅದು ಸಮಾಜಕ್ಕೆ ತೀರಾ ಕಂಟಕ ಅನಿಸುವವರೆಗೂ ಅದು ಸುದ್ದಿಯಾಗಲು ಅಪ್ರಸ್ತುತ. ಆದರೆ ಜನರು ಇಂಥ ಸುದ್ದಿಗಳಿಗೆ ಹೆಚ್ಚು ಪ್ರತಿಕ್ರಿಯಿಸುವುದರಿಂದ ಇಂಥ ಸುದ್ದಿಗಳೇ ಹೆಚ್ಚು ಪೋಸ್ಟ್ ಆಗುತ್ತಿವೆ. ಉದಾಹರಣೆಗೆ, ರಮ್ಯಾ-ನರೇಶ್-ಪವಿತ್ರ ಸುದ್ದಿ. 

ಮೇಲೆ ಹೇಳಲಾದ ಕೆಟ್ಟ ಸುದ್ದಿ (ವಿಷಯ ಅಥವಾ ಬರವಣಿಗೆ) ಪೋಸ್ಟ್ ಆದಾಗ ಜನರು ಅದಕ್ಕೆ ಹೆಚ್ಚು ಪ್ರತಿಕ್ರಿಯಿಸುತ್ತಾರೆ. ಒಂದು ವೆಬ್‌ಸೈಟ್ ಬರಹ ನೇರವಾಗಿ ಜನರನ್ನು ತಲುಪುವುದಕ್ಕಿಂತ ಅದು ಸಂಬಂಧಿತ ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚಾಗಿ ತಲುಪುತ್ತದೆ. ಉದಾಹರಣೆಗೆ ಫೇಸ್‌ಬುಕ್‌-ಎಕ್ಸ್ ಇತ್ಯಾದಿ‌.

ಇಲ್ಲಿ ಒಂದು ಕೆಟ್ಟ ಸುದ್ದಿ ಪಬ್ಲಿಷ್ ಆದಾಗ ಬಹಳಷ್ಟು ಮಂದಿ ಅದರ ಬಗ್ಗೆ ಸಿಟ್ಟು ವ್ಯಕ್ತಪಡಿಸಿ ಆ್ಯಂಗ್ರಿ ಇತ್ಯಾದಿ ರಿಯಾಕ್ಷನ್ ಒತ್ತುತ್ತಾರೆ. ಇನ್ನು ಕೆಲವರು ವಿಷಯ ಓದಿ, ಮತ್ತೆ ಕೆಲವರು ಬರೀ ಹೆಡ್ಡಿಂಗ್ ನೋಡಿ ಕಮೆಂಟ್ ಮಾಡುತ್ತಾರೆ. ಮತ್ತೊಂದಷ್ಟು ಜನ 'ನೋಡಿ ಇಂಥ ಸುದ್ದಿ ಬೇಕಿತ್ತಾ?' ಅಂತ ಅದನ್ನು ಶೇರ್ ಮಾಡಿಕೊಂಡು ಕೇಳುತ್ತಾರೆ. ಅಷ್ಟರಲ್ಲಾಗಲೇ ಇಲ್ಲಿ ಫೇಸ್‌ಬುಕ್‌ ಎಂಗೇಂಜ್‌ಮೆಂಟ್ ಅಥವಾ ಎಕ್ಸ್ ಇಂಪ್ರೆಷನ್ ಸಿಕ್ಕಾಪಟ್ಟೆ ಬಂದಿರುತ್ತದೆ. 

ಇನ್ನು ಆ ಒಂದು ಪೋಸ್ಟ್ ನೋಡುವ ಇತರರಿಗೆ ಸಿಕ್ಕಾಪಟ್ಟೆ ರಿಯಾಕ್ಷನ್-ಕಮೆಂಟ್ ಬಂದಿರುವ ಜೊತೆಗೆ ಶೇರ್ ಆಗಿರುವುದು ಕಾಣಿಸುತ್ತದೆ. ಅದನ್ನು ನೋಡಿ ಉಳಿದವರು 'ಏನೀ ಪೋಸ್ಟ್‌ಗೆ ಇಷ್ಟೊಂದು ರೆಸ್ಪಾನ್ಸ್ ಬಂದಿದೆ' ಅಂತ ಅವರೂ ಓದುತ್ತಾರೆ. ಅಲ್ಲಿಗೆ ಒಂದು ವ್ಯೂ ಪ್ಲಸ್. ಅವರು ಓದಿ ಸಿಟ್ಟಾಗಿ ಬೈದು ಕಮೆಂಟ್ ಮಾಡಿದರೆ ಆಗ ಎರಡು ಎಂಗೇಜ್‌ಮೆಂಟ್/ಇಂಪ್ರೆಷನ್ ಬೋನಸ್. ಇನ್ನು ಇದನ್ನು ನೋಡುವ ಪ್ರತಿಸ್ಪರ್ಧಿ ನ್ಯೂಸ್ ಪ್ಲ್ಯಾಟ್‌ಫಾರ್ಮ್‌ನವರು 'ನೋಡಿ ಇಂಥ ಸುದ್ದಿಯೇ ಓಡೋದು' ಅಂದ್ಕೊಂಡು ಅದೇ ಸುದ್ದಿಗೆ ಸಂಬಂಧಿಸಿದ ಮತ್ತಷ್ಟು ವಿಷಯ ಕೆದಕಿ, ಇನ್ನಷ್ಟು ರೋಚಕವಾಗಿ ಬರೆದು ಪಬ್ಲಿಷ್ ಮಾಡ್ತಾರೆ and so on..


ಇನ್ನು ಬರವಣಿಗೆ ಕೆಟ್ಟದಾಗಿದ್ದಾಗಲೂ ಹೀಗೆ. ತಪ್ಪಾಗಿದೆ ಎಂಬ ಬೈಗುಳ, ಟ್ರೋಲ್‌ಗಳೇ ಆ ಸುದ್ದಿಯನ್ನು ವೈರಲ್ ಆಗಿಸಿಬಿಡುತ್ತವೆ.


ಇದರಿಂದ ನೋಡುಗರು ಅಂಥ ಕೆಟ್ಟ ಸುದ್ದಿ/ಬರಹ ಪೋಸ್ಟ್ ಮಾಡುವವರ ಪೋಸ್ಟ್‌ಗೆ ಹೆಚ್ಚು ವ್ಯೂಸ್ ಬರುವಂತೆ ಮಾಡುತ್ತಾರೆ. ಆಗ ಒಳ್ಳೆಯ ಸುದ್ದಿ/ಬರಹ ಇರುವವರ ಪೋಸ್ಟ್ ಲೀಸ್ಟ್ ಸ್ಥಾನಕ್ಕೆ ತಲುಪುತ್ತದೆ. ಟಾಪ್ ಲಿಸ್ಟ್‌ನಲ್ಲಿ ಕೆಟ್ಟ ವಿಷಯದ, ತಪ್ಪು ಬರಹದ ಸುದ್ದಿಗಳೇ ರಾರಾಜಿಸುತ್ತಿರುತ್ತವೆ. ಇದರಿಂದ ಮುಂದೆ ಒಳ್ಳೆಯ ಸುದ್ದಿ/ಬರಹವೇ ಗೌಣ ಆಗುವಂಥ ಪರಿಸ್ಥಿತಿ ಬರುತ್ತದೆ.‌ ಅದು ಈಗಾಗಲೇ ಬಹಳಷ್ಟು ಆಗಿದೆ.



ಹಾಗಾಗಬೇಕೆಂದರೆ ನೋಡುಗರು ಏನು ಮಾಡಬೇಕು?


• ಕೆಟ್ಟ ವಿಷಯದ ಸುದ್ದಿಗಳಿಗೆ ಪ್ರತಿಕ್ರಿಯಿಸಬಾರದು. ಅಪ್ಪಿತಪ್ಪಿ ಗೊತ್ತಾಗದೆ ಓದಿ ನಂತರ ಇದ್ರಲ್ಲಿ ಏನೂ ಇಲ್ಲ ಅನಿಸಿದರೂ ಅದಕ್ಕೆ ಬಯ್ಯಬಾರದು. ಸುಮ್ಮನೆ ನಿರ್ಲಕ್ಷಿಸಿಬಿಡಿ.

• ಬರಹದಲ್ಲಿ ತಪ್ಪು ಕಾಣಿಸಿದರೆ ಕೂಡ ಬಯ್ಯಬೇಡಿ, ಟ್ರೋಲ್ ಮಾಡಬೇಡಿ, ಆಗಲೂ ನಿರ್ಲಕ್ಷಿಸಿ. 

• ಒಳ್ಳೆಯ ಸುದ್ದಿಗಳಿಗೆ, ನಾಲ್ಕು ಜನರಿಗೆ ಪ್ರಯೋಜನ ಆಗುವಂಥ ಸುದ್ದಿಗಳಿಗೆ ಲೈಕ್ ಮಾಡಿ, 'ಚೆನ್ನಾಗಿದೆ' ಅಂತ ಒಂದು ಕಮೆಂಟ್ ಮಾಡಿ. ಇನ್ನೂ ಇಷ್ಟವಾದರೆ, ಅತ್ಯುತ್ತಮ ಸುದ್ದಿ ಅನಿಸಿದರೆ, ಶೇರ್ ಮಾಡಿಕೊಳ್ಳುವುದರಿಂದ ಪರಿಣಾಮ ಬೀರಲಿದೆ ಅನಿಸಿದರೆ ಧಾರಾಳವಾಗಿ ಶೇರ್ ಮಾಡಿ.

• ಇಂದಿನಿಂದ ಒಂದು ಕೆಲಸ ಮಾಡಿ. ಬರಹದಲ್ಲಿನ ತಪ್ಪು ಹುಡುಕುವ ಬದಲು ಚೆನ್ನಾಗಿರುವ ಬರಹವನ್ನು ಗುರುತಿಸಿ.‌ ತಪ್ಪೇ ಇರದ ಬರಹವನ್ನು ಮೆಚ್ಚಿ, ಪ್ರತಿಕ್ರಿಯಿಸಿ. 'ನೋಡಿ ಈ ಹೆಡ್ಡಿಂಗ್ ಚೆನ್ನಾಗಿದೆ, ಸುದ್ದಿಯ ಬರವಣಿಗೆಯಲ್ಲಿ‌ ಒಂದೂ ತಪ್ಪಿಲ್ಲ' ಅಂತ ಸುದ್ದಿಯನ್ನು ಹಂಚಿಕೊಳ್ಳಿ, ಇಲ್ಲವೇ ಹಾಗಂತ ಕಮೆಂಟ್ ಮಾಡಿ.

• ನೀವು ಒಂದು ಕೆಟ್ಟ ಸುದ್ದಿಗೆ ಪ್ರತಿಕ್ರಿಯಿಸುವುದರಿಂದ ನಿಮ್ಮ ಫ್ರೆಂಡ್ಸ್‌ಗೂ ಆ ಕೆಟ್ಟ ಸುದ್ದಿ ನೋಟಿಫಿಕೇಷನ್ ಹೋಗುತ್ತದೆ, ಬೇಡಬೇಡವೆಂದರೂ ಕೆಟ್ಟದ್ದು ಪ್ರಮೋಟ್ ಆಗಿರುತ್ತದೆ. ಮತ್ತೆ ಮತ್ತೆ ಕಾಣಿಸುವ ಕೆಟ್ಟದ್ದು ಮನಸು ಕೆಡಿಸುತ್ತದೆ. ಅದೇ ನೀವು ಒಂದು ಒಳ್ಳೆಯ ಸುದ್ದಿಗೆ ಪ್ರತಿಕ್ರಿಯಿಸಿದರೆ ನಿಮ್ಮ ಸ್ನೇಹಿತರೆಲ್ಲರಿಗೂ ಒಳ್ಳೆಯ ಸುದ್ದಿಯ ನೋಟಿಫಿಕೇಷನ್ ಹೋಗಿ ಅದು ಅವರಿಗೆ ಹಿತ ಅನಿಸುತ್ತದೆ. ಒಳ್ಳೆಯದು ಪಸರಿಸುತ್ತದೆ, ವ್ಯಾಪಿಸುತ್ತದೆ.

ಎಲ್ಲ ಓಕೆ, ಆದರೆ ಒಳ್ಳೆಯದು ಎಷ್ಟಿದೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ನಿಜ.. ಈಗ ಒಳ್ಳೆಯ ಸುದ್ದಿ ಪ್ರಮಾಣ ಕಡಿಮೆ ಇರಬಹುದು. ಹಾಗಂತ ಕೆಟ್ಟದ್ದು ಜಾಸ್ತಿ ಇದೆ ಅಂತ ಅದಕ್ಕೇ ಪ್ರತಿಕ್ರಿಯಿಸಬೇಕಂತಿಲ್ಲ. ಮಹಾಭಾರತದ ಕುರುಕ್ಷೇತ್ರದಲ್ಲೂ ಕೌರವರೇ ಅಧಿಕ ಸಂಖ್ಯೆಯಲ್ಲಿದ್ದರು. ಕರ್ಣ ಮಹಾಪರಾಕ್ರಮಿ ಆಗಿದ್ದರೂ ಗೊತ್ತಿದ್ದೂ ಗೊತ್ತಿದ್ದು ಕೌರವರನ್ನು ಬೆಂಬಲಿಸಿ ಕೆಟ್ಟ. ಒಳ್ಳೆಯದರ ಪರವಿದ್ದ ಪಾಂಡವರ ಪರವಾಗಿ ಭಗವಾನ್ ಕೃಷ್ಣನೇ ಬೆಂಬಲಕ್ಕೆ ನಿಂತ. ಕೆಟ್ಟದ್ದಕ್ಕೆ ಪ್ರತಿಕ್ರಿಯಿಸುವ ಮಹಾಪರಾಕ್ರಮಿಗಳಾಗದಿದ್ದರೂ ಪರವಾಗಿಲ್ಲ, ಒಳ್ಳೆಯದರ ಪರ ನಿಲ್ಲಿ, ಆ ಗೊಲ್ಲನಂತೆ, ಆಗೊಲ್ಲ ಅನ್ನೋ ಮಾತೇ ಇರಲ್ಲ. 


ಕುರುಕ್ಷೇತ್ರ ಯುದ್ಧ 18 ದಿನ ನಡೆದಿತ್ತು, ಈಗ ಕಾಲ ಬದಲಾಗಿದೆ. ಈ ಯುದ್ಧದಲ್ಲಿ ನೀವು ಕನಿಷ್ಠ ಆರು ತಿಂಗಳಾದರೂ ಹೋರಾಡಬೇಕು. ಇವತ್ತಿನಿಂದ, ಈಗಿಂದಲೇ ಮೇಲೆ ಹೇಳಿರುವ ಕೆಲಸವನ್ನು ಇನ್ನು ಕನಿಷ್ಠ ಆರು ತಿಂಗಳು ಮಾಡಿ ನೋಡಿ. ಖಂಡಿತ ಬದಲಾವಣೆ ಆಗಿರುತ್ತದೆ.


ಬದಲಾವಣೆ ಜಗದ ನಿಯಮ..


ಬದಲಾಗದವರಿಗೆ ನೀವೇ ಯಮ..


0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ