Ts ads

12 ಜುಲೈ, 2025

ಚಾಣಕ್ಯ, ಬೀರಬಲ್ಲ, ತೆನಾಲಿರಾಮ & ತಜ್ಞರ ಸಮಿತಿ

 

ಹಿಂದಿನ ಕಾಲದಲ್ಲಿ ರಾಜ್ಯಗಳು ಸುಭಿಕ್ಷವಾಗಿದ್ದವು. ಒಂದುವೇಳೆ ಬಗೆಹರಿಸಲಾಗದ ಸಮಸ್ಯೆ ಬಂತೆಂದರೆ ಪರಿಹಾರವನ್ನು ಮಂತ್ರಿಗಳಲ್ಲಿ ಅಥವಾ ತಮ್ಮಲ್ಲೇ ಇರುವ ಆಸ್ಥಾನ ಪಂಡಿತರಲ್ಲಿ ಕೇಳುತ್ತಿದ್ದರು, ಇಲ್ಲವೇ ರಾಜರೇ ಮಾರುವೇಷ ಧರಿಸಿ ಪರಿಹಾರ ಅರಸಿ ಹೊರಡುತ್ತಿದ್ದರು. 



ಅಂದಿನ ಮಂತ್ರಿಗಳ್ಯಾರೂ ರಾಜರಂತೆ ಇರುತ್ತಿರಲಿಲ್ಲ. ಅವರಲ್ಲಿ ರಾಜ್ಯವಿದ್ದರೂ, ಅಂಥದ್ದೇನೇ ಆಸ್ತಿ ಇದ್ದರೂ ಬಹುತೇಕ ಎಲ್ಲವೂ ರಾಜ ಉಡುಗೊರೆಯಾಗಿ ಕೊಟ್ಟಿದ್ದೇ ಆಗಿರುತ್ತಿತ್ತು. ಇನ್ನು ಆಸ್ಥಾನಪಂಡಿತರು ನಗಿಸುತ್ತ, ನಗುನಗುತ್ತ ಪರಿಹಾರ ಸೂಚಿಸುತ್ತ ಯಾವ ಆಸೆ ಇರದೇ ರಾಜನಿಗೆ ಸಹಕರಿಸುತ್ತಿದ್ದರು. ಇಂಥವರ ಪೈಕಿ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿ ರಾಮಕೃಷ್ಣ, ಅಕ್ಬರನ ಆಸ್ಥಾನದಲ್ಲಿದ್ದ ಬೀರಬಲ್ಲ, ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಚಾಣಕ್ಯ ಮುಂತಾದವರು ಬಹುಮುಖ್ಯವಾಗಿ ನೆನಪಿಗೆ ಬರುವಂಥವರು. ರಾಜರಿಗೆ ಎದುರಾದ ಎಷ್ಟೋ ಸಮಸ್ಯೆಗಳಿಗೆ ಸುಲಭದಲ್ಲಿ ಸೂಕ್ತ ಪರಿಹಾರ ಸೂಚಿಸಿದ ಖ್ಯಾತಿ ಇವರದು.


ಆದರೆ ಈಗ ಏನಾದರೂ ದೊಡ್ಡ ಸಮಸ್ಯೆ ತಲೆದೋರಿತೆಂದರೆ ತಜ್ಞರ ಸಮಿತಿ ಅಂತ ಮಾಡುತ್ತಾರೆ. ಆರೋಗ್ಯ ಕ್ಷೇತ್ರದ ಕುರಿತ ಸಮಸ್ಯೆಯಾದರೆ ನಾಲ್ಕೈದು ದೊಡ್ಡ ಆಸ್ಪತ್ರೆಗಳನ್ನು ಹೊಂದಿರುವವರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿತ ಸಮಸ್ಯೆಯಾದರೆ ಐದಾರು ಕಾಲೇಜುಗಳನ್ನು ನಡೆಸುವವರು, ಕಬ್ಬು ಬೆಳೆಗಾರರಿಗೆ ಸಂಬಂಧಿಸಿದ ಸಮಸ್ಯೆಯಾದರೆ ಮೂರ್ನಾಲ್ಕು ಸಕ್ಕರೆ ಕಾರ್ಖಾನೆ ಇರುವವರೇ ತಜ್ಞರ ಸಮಿತಿಯಲ್ಲಿ ಇರುವವರಾಗಿರುತ್ತಾರೆ ಅಥವಾ ಅವರೇ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. 'ಬೇಲಿಯೇ ಎದ್ದು ಹೊಲ ಮೇಯುವಂಥ' ಈ ಪರಿಸ್ಥಿತಿಯಲ್ಲಿ ಫಸಲಿನ ಭಕ್ಷಣೆಯೇ ಅಸಲು ವಿಷಯವಾಗಿರುತ್ತದೆ ಹೊರತು ಫಸಲಿನ ರಕ್ಷಣೆ ತೋರಿಕೆಯ ಸಂಗತಿ ಮಾತ್ರ.


ಅಂದು ವಿದೂಷಕರಂತಿದ್ದವರೇ ವಿದ್ವಾಂಸರಾಗಿರುತ್ತಿದ್ದರು. ಇಂದು ನಿಜವಾಗಿಯೂ ಬುದ್ಧಿ- ಕಾಳಜಿ ಇರುವವರನ್ನು ಜೋಕರ್ ಥರ ನೋಡಲಾಗುತ್ತದೆ. ವಿದ್ವಾಂಸರಲ್ಲದ ವಿಧ್ವಂಸಕರೇ ನಿರ್ಣಾಯಕರಾಗಿರುವಾಗ ಬದಲಾವಣೆ-ಸುಧಾರಣೆ ಅಷ್ಟು ಸುಲಭದಲ್ಲಿ ಆಗುವುದು ನಿಜಕ್ಕೂ ತಮಾಷೆಯೇ... 

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ