ಪ್ರತಿ ವರ್ಷವೂ ಬರುವ ಈ ಸ್ನೇಹ ದಿನ, ನಮ್ಮ ಬದುಕಿನ ಪಯಣದಲ್ಲಿ ಸಿಕ್ಕಿರುವ ಸಂಬಂಧಗಳನ್ನು ಮೆಲುಕು ಹಾಕಲು ಒಂದು ಉತ್ತಮ ಅವಕಾಶ. ಕೆಲವೊಮ್ಮೆ ಮನಸ್ಸಿಗೆ ಹತ್ತಿರವಾಗುವ ಮಾತುಗಳನ್ನು ಕೇಳಿದಾಗ ನಾವು ನಿಜಕ್ಕೂ ಥ್ರಿಲ್ ಆಗುತ್ತೇವೆ, ಅದರೆ ಕಾಲ ಕಳೆದಂತೆ ಅದೇ ಮಾತುಗಳು ಕಟುವಾದ ಅನುಭವವನ್ನು ನೀಡುತ್ತವೆ. ಈ ಸ್ನೇಹದ ಹಾದಿಯಲ್ಲಿ ನಾನೇನು ಕಂಡೆ? ಇಲ್ಲಿ ನನ್ನ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನನ್ನ ಸ್ನೇಹಿತರೊಬ್ಬರು ಹೇಳಿದ ಒಂದು ಮಾತು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ: "ಗುರೂ.. ಒಂದು ಮಿಸ್ಡ್ ಕಾಲ್ ಕೊಡು ಸಾಕು, ನಾನೇ ಕಾಲ್ ಮಾಡ್ತೀನಿ..", "ಮಧ್ಯರಾತ್ರಿ ಇರ್ಲಿ ಗುರೂ.. ಒಂದು ಕಾಲ್ ಮಾಡು ಸಾಕು, ನಿದ್ರೆಯಿಂದ ಎದ್ದು ಬರ್ತೀನಿ..". ಹೀಗೆ ನಮ್ಮನ್ನು ನಮ್ಮ ಆತ್ಮಕ್ಕಿಂತಲೂ ಹತ್ತಿರ ಎಂದು ಹೇಳುವ ಕೆಲವು ಮಾತುಗಳು ಮನಸ್ಸಿಗೆ ಖುಷಿ ತರುತ್ತವೆ. "ನೀನು ಬರೀ ಫ್ರೆಂಡ್ ಅಲ್ಲ, ನನ್ನ ಬ್ರದರ್ ಥರ" ಎಂದಾಗ ಯಾರಿಗೆ ತಾನೆ ಖುಷಿಯಾಗುವುದಿಲ್ಲ? ಇಂತಹ ಮಾತುಗಳು ನಿಜವೆಂದು ನಂಬಿ, ಕಷ್ಟ ಬಂದಾಗ ಕೈ ಹಿಡಿಯುತ್ತಾರೆ ಅಂದುಕೊಂಡರೆ, ಅವರು ನಮ್ಮನ್ನು ಬಿಟ್ಟು ಹೋಗಿರುವುದು ನೋವನ್ನುಂಟು ಮಾಡುತ್ತದೆ.
ಕೆಲವು ಸ್ನೇಹಿತರನ್ನು ಮೊದಲಿಗೆ ನೋಡಿದಾಗ ಇಷ್ಟವಾಗದೇ ಇರಬಹುದು, ಆದರೆ ದಿನಕಳೆದಂತೆ ಅವರೇ ನಮಗೆ ಅತ್ಯಾಪ್ತರಾಗಿರುವುದುಂಟು. ಅದೇ ರೀತಿ, ನಮ್ಮ ನಿಲುವುಗಳು ಅವರಿಗೆ ಅನುಕೂಲಕರವಾಗಿದ್ದಾಗ "ರವಿಕಾಂತ ಸೂಪರ್" ಎಂದು ಹೊಗಳಿದವರು, ನಮ್ಮ ನಿಲುವು ಅವರ ವಿರುದ್ಧವಾದಾಗ "ರವಿಕಾಂತ ಲೋಫರ್" ಎಂದು ಹಿಂದಿನಿಂದ ಆಡಿಕೊಂಡವರನ್ನೂ ನಾನು ನೋಡಿದ್ದೇನೆ. ಕೆಲವೊಮ್ಮೆ ನಮ್ಮ ಬದುಕಿನಲ್ಲಿ 'ಪರಿಚಿತ' ಎನ್ನುವ ಸುಳಿವೇ ಇಲ್ಲದೇ ಹತ್ತಿರವಾಗಿ, ನಾವು ಸ್ನೇಹಕ್ಕಾಗಿ ಅಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುತ್ತಾರಾ ಎಂದು ಆಶ್ಚರ್ಯಪಡುವಷ್ಟು ಕ್ಲೋಸ್ ಆದವರೂ ಇದ್ದಾರೆ. ಸ್ನೇಹ ಪ್ರೀತಿಯಾಗಿದ್ದನ್ನು ಸಂಭ್ರಮಿಸಿದ್ದೇನೆ. ಆದರೆ, "ಎಲ್ಲ ಇಷ್ಟೇ, ಬರೀ ಭ್ರಮೆ.. ಕಟುವಾಸ್ತವವೇ ಬೇರೆ" ಎಂಬ ಕಠಿಣ ಸತ್ಯವನ್ನು ಅನುಭವಿಸಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ.
ಸ್ನೇಹ ಎಂದರೆ ಸಮಾನ ವಯಸ್ಕರ ಮಧ್ಯೆ ಮಾತ್ರ ಇರುತ್ತದೆ ಎಂಬುದು ಕೂಡ ತಪ್ಪು ಕಲ್ಪನೆ. ನನ್ನ ಬದುಕಿನಲ್ಲಿ ನನಗಿಂತ ಹತ್ತಾರು ವರ್ಷ ದೊಡ್ಡವರು ಮತ್ತು ಚಿಕ್ಕವರೂ ಸ್ನೇಹಿತರಾಗಿದ್ದಾರೆ. ಸ್ನೇಹದ ವೈಶಿಷ್ಟ್ಯತೆ ಅರಿಯಲು ಅವರ ಸಹವಾಸ ತುಂಬಾ ನೆರವಾಗಿದೆ. ಈ ಬದುಕಿನ ಪ್ರಯಾಣದಲ್ಲಿ ಬಂದ ಬಹುತೇಕ ಸ್ನೇಹಿತರೂ ನೆನಪಿದ್ದಾರೆ. ಕೆಲವರು ನೆನಪಾದಾಗ ಖುಷಿಯಾಗುತ್ತದೆ, ಇನ್ನು ಕೆಲವರು ನೆನಪಾದಾಗ ಬೇಸರವಾಗುತ್ತದೆ, ಇನ್ನೂ ಕೆಲವು ಸ್ನೇಹಿತರು ನೆನಪಾದಾಗ ಖುಷಿ ಮತ್ತು ದುಃಖ ಎರಡೂ ಒಟ್ಟಿಗೆ ಬರುತ್ತವೆ.
"ಇನ್ನು ಸಾಕು, ಯಾರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳಬಾರದು" ಎಂದು ನಾನು ಅಂದುಕೊಳ್ಳುವಾಗಲೇ ಇನ್ನಾರೋ ಹೊಸಬರು ಹತ್ತಿರವಾಗಿಬಿಡುತ್ತಾರೆ. ಅದಕ್ಕೇನೋ, ಹೊಸ ಹೊಸ ಸ್ನೇಹಿತರನ್ನು ನೀಡುತ್ತಲೇ ಇರುವ ಈ ಅದ್ಭುತವಾದ ಸ್ನೇಹಕ್ಕೆ ನಾನು ಮತ್ತೆ ಮತ್ತೆ ಆಶ್ಚರ್ಯ ಪಡುತ್ತಲೇ ಇರುತ್ತೇನೆ.
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು! ನೀವು ಇಂತಹ ಯಾವ ಅನುಭವಗಳನ್ನು ಪಡೆದಿದ್ದೀರಿ ಎಂಬುದನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಿ.
0 comments:
ಕಾಮೆಂಟ್ ಪೋಸ್ಟ್ ಮಾಡಿ