Ts ads

03 ಮಾರ್ಚ್, 2025

ಪದವಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರ

 ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಾಪಕರ ನಡುವೆ "ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್" ವಿಷಯದ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಕುರಿತು ಉಂಟಾದ ವಿವಾದವು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ವಿವಾದದಿಂದಾಗಿ ಪ್ರಥಮ ಸೆಮಿಸ್ಟರ್ ಬಿಕಾಂನ ಎಲ್ಲಾ ವಾಣಿಜ್ಯ ವಿಷಯಗಳ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಸ್ಥಗಿತಗೊಂಡಿದೆ.

ವಿವಾದದ ಹಿನ್ನೆಲೆ: ಬಿ.ಕಾಮ್ ಪದವಿ ಪಠ್ಯಕ್ರಮದಲ್ಲಿ ಪ್ರತಿ ಸೆಮಿಸ್ಟರ್ ಒಟ್ಟು ಆರು ವಿಷಯಗಳಿವೆ. ಇವುಗಳಲ್ಲಿ ವಾಣಿಜ್ಯಶಾಸ್ತ್ರದ ಅಧ್ಯಾಪಕರು ಬೋಧಿಸಬಹುದಾದ ವಿಷಯಗಳು ಮೂರು: ಫೈನಾನ್ಸಿಯಲ್ ಅಕೌಂಟಿಂಗ್, ಮೊಡರ್ನ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಮತ್ತು ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್. ಉಳಿದ ಮೂರು ವಿಷಯಗಳು ಕನ್ನಡ, ಇಂಗ್ಲಿಷ್ ಮತ್ತು ಭಾರತೀಯ ಸಂವಿಧಾನ.


ವಿಶ್ವವಿದ್ಯಾಲಯವು "ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್" ವಿಷಯಕ್ಕೆ ಸಂಂಧಪಟ್ಟಂತೆ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಮಧ್ಯಂತರ ಅಧಿಸೂಚನೆಯೊಂದನ್ನು ಹೊರಡಿಸಿ ಈ ವಿಷಯವನ್ನು ಅರ್ಥಶಾಸ್ತ್ರದ ಉಪನ್ಯಾಸಕರು ಬೋಧಿಸಬೇಕು ಎಂದು ಅಧಿಸೂಚನೆ ಹೊರಡಿಸಿತ್ತು . ತದನಂತರ, ಡಿಸೆಂಬರ್ ೩೧ ರಿಂದ ಪರೀಕ್ಷೆಗಳು ಆರಂಭವಾಗಿ ಜನವರಿ ತಿಂಗಳ ಅಂತ್ಯದವರೆಗೆ ಪದವಿ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳನ್ನು ಮುಗಿಸಿದರು.

ವಾಣಿಜ್ಯಶಾಸ್ತ್ರದ ಅಧ್ಯಾಪಕರು ಕೇವಲ ಎರಡು ವಿಷಯಗಳನ್ನು (ಫೈನಾನ್ಸಿಯಲ್ ಅಕೌಂಟಿಂಗ್ ಮತ್ತು ಮೊಡರ್ನ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್) ಮಾತ್ರ ಬೋಧಿಸಲು ಅವಕಾಶವದಗಿಸುವುದರಿಂದ ಈ ನಿರ್ಧಾರವು ವಾಣಿಜ್ಯಶಾಸ್ತ್ರದ ಅಧ್ಯಾಪಕರಿಗೆ ಅನ್ಯಾಯವಾಗಿದೆ ಎಂದು ಅವರು ಭಾವಿಸುತ್ತಿದ್ದಾರೆ.

ವಾಣಿಜ್ಯಶಾಸ್ತ್ರ ಮಹಾವಿದ್ಯಾಲಯ ಅಧ್ಯಾಪಕರ ಸಂಘವು ಪ್ರಶ್ನೆ ಎತ್ತಿದೆ: "ಒಟ್ಟು ಆರು ವಿಷಯಗಳ ಪೈಕಿ ನಾಲ್ಕು ವಿಷಯಗಳನ್ನು ವಾಣಿಜ್ಯಶಾಸ್ತ್ರ ಹೊರತಾದ ಅಧ್ಯಾಪಕರು ಬೋಧನೆ ಮಾಡುತ್ತಿದ್ದಾಗ, ವಾಣಿಜ್ಯಶಾಸ್ತ್ರದ ಅಧ್ಯಾಪಕರಿಗೆ ಕೇವಲ ಎರಡು ವಿಷಯಗಳನ್ನು ಮಾತ್ರ ಬೋಧಿಸಲು ಅವಕಾಶ ನೀಡುವುದು ಹೇಗೆ ನ್ಯಾಯಸಮ್ಮತವಾಗಬಹುದು? ಇದರಿಂದಾಗಿ ಬಿಕಾಂ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಏನು ಹೇಳಿಕೊಡುವ ಸಾಧ್ಯತೆ ಇದೆ?"

ಆದರೆ, ಈ ವಿಷಯದ ಉತ್ತರಪತ್ರಿಕೆಗಳ ಮೌಲ್ಯಮಾಪನದ ಕುರಿತು ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಅಧ್ಯಾಪಕರ ನಡುವೆ ವಿವಾದ ಉಂಟಾಗಿದೆ. ವಾಣಿಜ್ಯಶಾಸ್ತ್ರದ ಅಧ್ಯಾಪಕರು, "ಈ ವಿಷಯವನ್ನು ಅರ್ಧಕ್ಕಿಂತ ಹೆಚ್ಚು ನಾವೇ ಬೋಧಿಸಿದ್ದೇವೆ ಮತ್ತು ಪ್ರಶ್ನೆಪತ್ರಿಕೆಯನ್ನು ನಾವೇ ತಯಾರಿಸಿದ್ದೇವೆ. ಆದ್ದರಿಂದ ಮೌಲ್ಯಮಾಪನವನ್ನು ನಾವೇ ಮಾಡಬೇಕು" ಎಂದು ವಾದಿಸುತ್ತಿದ್ದಾರೆ. ಆದರೆ, ಅರ್ಥಶಾಸ್ತ್ರದ ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಮೌಲ್ಯಮಾಪನ ಸಚಿವರು, "ಈ ವಿಷಯವನ್ನು ಅರ್ಥಶಾಸ್ತ್ರದ ಉಪನ್ಯಾಸಕರು ಮಾತ್ರ ಮೌಲ್ಯಮಾಪನ ಮಾಡಬೇಕು" ಎಂದು ಪ್ರತಿಪಾದಿಸುತ್ತಿದ್ದಾರೆ.

ಈ ವಿವಾದದಿಂದಾಗಿ, ವಾಣಿಜ್ಯಶಾಸ್ತ್ರದ ಎಲ್ಲಾ ಅಧ್ಯಾಪಕರು ಪ್ರಥಮ ಸೆಮಿಸ್ಟರ್ ಎಲ್ಲಾ ವಾಣಿಜ್ಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದಾರೆ. ಇದರಿಂದಾಗಿ ವಿಶ್ವವಿದ್ಯಾಲಯವು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ.




ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಮಹಾವಿದ್ಯಾಲಯ ಅಧ್ಯಾಪಕರ ಸಂಘವು ಈ ವಿಷಯವನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ್ ಜಾರಿಕಿಹೊಳಿ ಅವರಿಗೆ ತಲುಪಿಸಿದೆ. ಸಂಘದವರು, "ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್ ವಿಷಯವು ವಾಣಿಜ್ಯಶಾಸ್ತ್ರಕ್ಕೆ ಸಂಬಂಧಪಟ್ಟದ್ದು ಮತ್ತು ಅದರ ಮೌಲ್ಯಮಾಪನವನ್ನು ನಾವೇ ಮಾಡಬೇಕು" ಎಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಚಿವರು ಕುಲಪತಿಗಳು ಮತ್ತು ಕುಲಸಚಿವರನ್ನು ಕರೆಸಿ ಮಾತನಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಆದರೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು "ಮಾರ್ಕೆಟ್ ಬಿಹೇವಿಯರ್ ಅಂಡ್ ಬಿಜನೆಸ್ ಡಿಸಿಷನ್" ವಿಷಯದ ಉತ್ತರಪತ್ರಿಕೆಗಳನ್ನು ಅರ್ಥಶಾಸ್ತ್ರದ ಉಪನ್ಯಾಸಕರು ಮಾತ್ರ ಮೌಲ್ಯಮಾಪನ ಮಾಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಕೋಪಗೊಂಡು ಕೆಂಡಾಮಂಡಲವಾದ ವಾಣಿಜ್ಯಶಾಸ್ತ್ರ ಮಹಾವಿದ್ಯಾಲಯ ಅಧ್ಯಾಪಕರ ಸಂಘದವರು, ಪ್ರಥಮ ವರ್ಷ ಬಿಕಾಂನ ಯಾವುದೇ ಉತ್ತರಪತ್ರಿಕೆಯನ್ನು ಮೌಲ್ಯಮಾಪನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.





0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ