ನಮ್ಮ ಶಾಲೆಯ ದೇವರ ಹತ್ತಿರವೇ ಹೋಗಿ ನಿಂತೆ..
ಗಣೇಶ ಪಿಸುಗುಟ್ಟಿದ ಹಾಗನಿಸಿ ಆ ಕಡೆ ವಾಲಿ ಸ್ವಲ್ಪ ಗಮನ ಕೊಟ್ಟು ಕೇಳಿದೆ..
ಹೌದು..ಅವನು ಮಾತಾಡುತ್ತಿದ್ದ..
ʼಏ ಮಾದು.. ನಾನೇ ಏಕದಂತ..
ನಿನ್ನ ಭಕ್ತಿಗೆ ಮೆಚ್ಚಿದ್ದೇನೆ.. ಅನುಗ್ರಹ/ಆಶೀರ್ವಾದ ಎಂಬಂತೆ ಒಂದಷ್ಟು ಕಿವಿಮಾತು ಹೇಳುತ್ತಿದ್ದೇನೆ ಕೇಳು..ʼ ಎಂದ.. ಪಕ್ಕದಲ್ಲಿ ನಿಂತ ಪ್ರಕಾಶ್ ಚನ್ನಗೌಡರ ಸರ್ ದೇವರು ನಿಮಗೆ ಏನೋ ಹೇಳ್ ಬೇಕ್ ಅಂತ ಮಾಡಿದ್ದಾರೆ ಕೇಳಿ ಅಂದ್ರ...
(ಗಣೇಶ ಹೇಳಿದ್ದನ್ನೇ ಇಲ್ಲಿ ಪಾಯಿಂಟ್ ಮಾಡಿ ಬರೆದಿದ್ದೇನೆ ನೋಡಿ)
• ನಾನು ಹೇಗೆ ಹುಟ್ಟಿದೆ ಎಂಬುದನ್ನು ನೀವೆಲ್ಲ ಇಲ್ಲಿ ತಿಳಿದಿದ್ದೀರಿ ಎನ್ನುವುದು ನನಗೆ ಎಂದೋ ತಿಳಿದಿದೆ. ಏಕೆಂದರೆ ಗಣೇಶ ಹೇಗೆ ಹುಟ್ಟಿದ ಎಂಬುದು ಗೊತ್ತಿರುವವರು ಎಂದಿಗೂ ಪಿಒಪಿ ಗಣೇಶನನ್ನು ಪೂಜಿಸುವುದಿಲ್ಲ. ಮೃತ್ತಿಕೆ ರೂಪದಲ್ಲೇ ನನ್ನನ್ನು ಪೂಜಿಸಿದ್ದಕ್ಕೆ ನಿಮಗೆಲ್ಲ ಒಳ್ಳೆಯದಾಗಲಿ.
• ಓಡಾಡಲು ದೊಡ್ಡ ವಾಹನವೇ ಬೇಕು ಎಂದು ನೀನು ಬಯಸಬೇಡ.. ನನ್ನನ್ನೇ ನೋಡು, ನಾನು ಚಿಕ್ಕ ವಾಹನದಲ್ಲೇ ಲೋಕಸಂಚಾರ ಮಾಡುತ್ತಿಲ್ಲವೇ?
• ನಮ್ಮನ್ನು ಹೊತ್ತು ಮೆರೆಸಿದವರೇ ಒಂದು ದಿನ ನಮ್ಮನ್ನು ಮುಳುಗಿಸಿಬಿಡುತ್ತಾರೆ ಎಂಬ ಎಚ್ಚರಿಕೆ ಇರಲಿ. ಇದನ್ನು ನನ್ನ ಅನುಭವದಿಂದಲೇ ಹೇಳುತ್ತಿದ್ದೇನೆ.
• ಮನಸ್ಸಿನಲ್ಲಿರುವ ಕ್ಲೇಶ ಕಳೆದುಕೊಳ್ಳು, ತಲೆಯಲ್ಲಿರುವ ಕೇಶ ಉಳಿಸಿಕೊಳ್ಳು. ನಾನು ವಿಘ್ನನಿವಾರಕನೇ ಹೊರತು ʼವಿಗ್ʼನ ನಿವಾರಕ ಅಲ್ಲ.
• ನನ್ನನ್ನು ಪೂಜಿಸಿ ವಿಸರ್ಜಿಸುವುದಷ್ಟೇ ಚೌತಿಯ ಆಚರಣೆ ಅಲ್ಲ. ಮನದ ಕಲ್ಮಷವನ್ನೆಲ್ಲ ನಿವಾರಿಸಿಕೊಳ್ಳುವುದೇ ನಿಜವಾದ ವಿಸರ್ಜನೆ.
• ನೋಡು.. ಇಷ್ಟುದ್ದ ಮೂಗಿನ ನಾನು ಎಲ್ಲರ ವಿಘ್ನ ನಿವಾರಿಸುತ್ತೇನೆ ನಿಜ. ಹಾಗಂತ ಚೋಟುದ್ದ ಮೂಗಿನ ನೀನು ಅನಗತ್ಯವಾಗಿ ಸಂಬಂಧ ಪಡದ ವಿಷಯಗಳಲ್ಲಿ ಮೂಗು ತೂರಿಸಿ ತೊಂದರೆ ಮಾಡಿಕೊಳ್ಳಬೇಡ.
• ನೀವು ಮನುಷ್ಯರು ಎಷ್ಟೇ ಪ್ರಯತ್ನಿಸಿದರೂ ಗಜಮುಖ ಆಗಲಾರಿರಿ, ಷಣ್ಮುಖನೂ ಆಗಲಾರಿರಿ. ಆದರೆ ಸದಾ ಹಸನ್ಮುಖರಾಗಿ ಇರಲು ಸಾಧ್ಯ, ಆ ನಿಟ್ಟಿನಲ್ಲಿ ನಿನ್ನದು ನಿರಂತರ ಪ್ರಯತ್ನವಿರಲಿ.
• ನಿನಗೆ ನನ್ನ ಥರ ದೊಡ್ಡ ತಲೆ ಇರದಿರಬಹುದು, ಆದರೆ ನೀನು ದೊಡ್ಡದಾಗಿ ಯೋಚಿಸಬಹುದು, ನಿನ್ನ ಯೋಚನೆಗಳು ದೊಡ್ಡದಾಗಿರುತ್ತವೆ, ಇನ್ನೂ ದೊಡ್ಡದಾಗಿ ಯೋಚಿಸಲು ಪ್ರಯತ್ನಿಸು. ನನ್ನ ಥರ ಮೊರದಗಲದ ಕಿವಿ ಇಲ್ಲದಿರಬಹುದು, ಆದರೂ ನೀನು ಗಮನ ಕೊಟ್ಟು ಕೇಳಬಹುದು. ನನ್ನ ಹಾಗೆ ಉದ್ದ ಮೂಗು (ಸೊಂಡಿಲು) ಇಲ್ಲದಿರಬಹುದು, ಆದರೂ ನೀನು ಅಪಾಯಗಳ ವಾಸನೆಯನ್ನು ಗ್ರಹಿಸಬಹುದು, ಹುಷಾರಾಗಿರು. ನನ್ನ ಥರ ದೊಡ್ಡ ಹೊಟ್ಟೆ ಇಲ್ಲದಿರಬಹುದು, ಆದರೂ ನೀನು ಎಂಥ ವಿಷಯವನ್ನೇ ಅರಗಿಸಿಕೊಳ್ಳಬಹುದು.
• ನಿನ್ನಲ್ಲಿ ಅಂಕುಶ ಇಲ್ಲದಿರಬಹುದು. ಆದರೆ ನಿನ್ನಲ್ಲಿರುವ ಲೇಖನಿಯನ್ನೇ ಅಂಕುಶವಾಗಿ ಬಳಸಬಹುದು. ಅದನ್ನು ತಪ್ಪು ಮಾಡಿದವರನ್ನಷ್ಟೇ ತಿವಿಯಲು ಮಾತ್ರ ಬಳಸು.
• ನೀನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ ಅಂತ ಗೊತ್ತು, ಆದರೆ ನಾನು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ಆದರೂ ನೀನು ನನ್ನನ್ನು ಫಾಲೋ ಮಾಡಬಹುದು. ಇಲ್ಲಿ ನನ್ನನ್ನು ಗೋಡೆಗೆ ಆನಿಸಿ ಕೂರಿಸಿದ್ದೀರಿ, ನಿನಗೆ ಪ್ರದಕ್ಷಿಣೆ ಬರಲಿಕ್ಕೆ ಆಗುವುದಿಲ್ಲ. ಒಂದು ಕೆಲಸ ಮಾಡು, ನೀನು ಮನೆಗೆ ಹೋಗಿ ತಂದೆ-ತಾಯಿಗೆ ಮೂರು ಪ್ರದಕ್ಷಿಣೆ ಬಾ, ಆಗ ನೀನು ನನ್ನನ್ನು ಫಾಲೋ ಮಾಡಿದ ಹಾಗೇ ಆಗುತ್ತದೆ.
• ಎಷ್ಟು ಬೇಕೊ ಅಷ್ಟೇ ತಲೆ ಕೆಡಿಸಿಕೊ, ತಲೆ ಹೋಗುವಂಥದ್ದೇನೂ ಆಗಲ್ಲ. ಅಷ್ಟಕ್ಕೂ ತಲೆ ಹೋದರೂ ಬದುಕಬಹುದು ಎಂಬುದಕ್ಕೆ ನಾನೇ ನಿದರ್ಶನ